ಭಾನುವಾರ, ಆಗಸ್ಟ್ 10, 2014

ಬ್ರಹ್ಮನಿಗೂ ಭವಲೋಕದ(ಭೂಲೋಕದ) ಚಿಂತೆ-೩

ಸ್ವಲ್ಪ ತಡೆದು ಮತ್ತೆ ನುಡಿದಳು ಮಾತೆ ಸರಸ್ವತಿ ದೇವಿ, "ತ್ರಿಕಾಲ ಜ್ಞಾನಿಯಾದ ನಿನಗೆ ತಿಳಿಯದಿರುವುದೇನಿದೆ ನಾರದ..."
"ಹೌದು, ನನ್ನ ಮನದ ಮಾತನ್ನೇ ನೀನೂ ನುಡಿಯುತ್ತಿರುವೆ" ನಾರದರೆಂದರು.

"ನಾರದ, ಇದು ಕಲಿಯುಗಾರಂಭ ಕಾಲವಷ್ಟೇ.  ಮುಂದೆ ಮುಂದುವರೆದಂತೆ ಕಲಿಪ್ರವೇಶವಾಗಲಿದೆ. ಅದಕ್ಕಾಗಿ ಮುನ್ಸೂಚನೆ ಮುನ್ನೆಚ್ಚರಿಗಳೂ ಜಂಗಮವೆನಿಸಿರುವ ಜಗತ್ತಿನಲ್ಲಿ ಇರಬೇಕಲ್ಲವೇ..?"ಬ್ರಹ್ಮದೇ ಹೇಳಿದನು."ಪಿತಾಮಹ! ಎಂದಿಗೂ ಅಧರ್ಮದ ಕೈಮೇಲಾಗುವುದೆಂಬುದು ಲೋಕದ ವಾಡಿಕೆ. ಅದು ವಾಡಿಕೆಯಾಗಿಯೇ ಉಳಿಯುವುದಿಲ್ಲ ಅಲ್ಲವೇ ?"ನಾರದರೆಂದರು.

"ಧರ್ಮವು ಯಾವಾದಲೂ ದೇದೀಪ್ಯಮಾನವಾಗಿದ್ದರೆ ಅದರ ಪ್ರಭಾವವೂ ವರ್ಚಸ್ಸೂ ಅರಿವಾಗುವುದಿಲ್ಲ. ಹಾಗೆಂದು ಧರ್ಮವು ಪೂರ್ಣ ಕ್ಷಯಿಸಿ ಹೋಗಬಾರದಲ್ಲವೇ? ಸ್ಥಾವರಕೆ ಅಳಿವುಂಟು ಜಂಗಮಕೆ ಇಲ್ಲ ಎಂಬುದು ಜನರಲ್ಲಿ ಜನಜನಿತವಾಗಿದೆ. ಸ್ಥಾವರಕೆ ಅಳಿವೆಂದರೆ ಸಂಪೂರ್ಣನಾಶವೇನಲ್ಲ... ಜಂಗಮಕೆ ಉಳಿವೆಂದರೆ ದೈವಿಕವಾದ ಪೂರ್ಣತ್ವಕ್ಕೆ ಅಳಿವೆಂಬುದಿಲ್ಲ. " ಬ್ರಹ್ಮದೇವರೆಂದರು.

"ಅಂದಹಾಗೆ, ಕಲಿಪ್ರವೇಶವಾಗುವುದೆಂದರೆ ಕಲಿಗಾಲದ ಉಳಿವಿಗೇ ತಾನೇ..? ಜನಮಾನಸವನ್ನು ಎಚ್ಚರಿಸಿ ಸತ್ ಶಕ್ತಿಯ ಮಹತ್ವದರಿವಿನಲಿ ಮುನ್ನೆಡೆಸಲಿಕ್ಕೆಂದೇ ಆಗುವ ಯುಗಪರಿವರ್ತನೆಗೆ ನಾಂದಿಯಲ್ಲವೇ...?" ನಾರದರೆಂದರು.
"ನಾರದ, ಆಗುವುದೇನಲ್ಲವೂ ಸೂಕ್ತ ಕಾಲಕ್ಕೇ ಆಗುತ್ತದೆ. ಸಂಪೂರ್ಣ ಅನರ್ಥಕಾರಿಯಾಗಿ ಸರ್ವನಾಶವಾದರೆ ಪುನರುತ್ಥಾನ ಪುನರುಜ್ಜೀವನವೂ ದುಸ್ಸಾಧ್ಯವಾದೀತಲ್ಲವೇ..?"

"ಅಂದರೆ,ಧರ್ಮವು ಸಂಪೂರ್ಣ ಕ್ಷಯಿಸಿ ಹೋಗದಂತೆ ಕಾಲಕಾಲಕ್ಕೆ ಜನಜಾಗೃತಿ ಉಂಟಾಗಬೇಕೆಂದೇ...? ಅದೇನು ಕಲಿಪ್ರಭಾವವೋ ಆಳುವವರಲ್ಲಿ ತಾವೇ ಕಟ್ಟಿಕೊಂಡ ವ್ಯೂಹದಲ್ಲಿ ಸಿಕ್ಕು ಹೊರಬರಲಾಗದೇ ಇದ್ದಾರೆ" ನಾರದರೆಂದರು.


"ಹೌದು ನಾರದ ಆಳುವ ಅರಸರ ಕುಯುಕ್ತಿ ನೀತಿಗಲೇ ಅರಾಜಕತೆ ಉಂಟುಮಾಡುತ್ತದೆ. ಅವರೂ ಕಂಗೆಡುವುದಲ್ಲದೇ ಪ್ರಜೆಗಳನ್ನೂ ಕಂಗಾಲಾಗಿಸಿಬಿಡುತ್ತಾರೆ. ಹೀಗಾಗಿ ಯಥಾ ರಾಜಾ ತಥಾ ಪ್ರಜಾ ಎಂಬಂತೇ ತ್ರಿಗುಣಾತ್ಮಕ ಪ್ರಪಂಚದಲ್ಲಿ ಯಾವಾಗಲೂ ಕೆಟ್ಟದ್ದೇ ಎದ್ದು ತೋರುವುದೂ ಕಲಿಪ್ರಭಾವವೇ.. ಆಗುವುದೇನಿದ್ದರೂ ಒಳಿತಿಗೆ ಮಹತ್ವ ಬರಲೆಂದೇ... ಇದು ಭವಿಷ್ಯಕ್ಕೆ ಭಾಷ್ಯ ಬರೆಯುವ ನಿನಗೆ ತಿಳಿಯದೇನು...."

"ನನ್ನ ಅರಿವಿಗೆ ಬಂದಂತೆ ಭವಿಷ್ಯದಲ್ಲಿ ಭರತಖಂಡದಲ್ಲಷ್ಟೇ ಶ್ರೇಷ್ಠವೆನಿಸಿರುವ ಸನಾತನ ಧರ್ಮ ಸಂಸ್ಕೃತಿಗಳು ದೇಶವಿದೇಶಗಳಲ್ಲಿ ವಿದೇಶೀಯರ ಮೇಲೆ ಹೆಚ್ಚು ಹೆಚ್ಚು ಪ್ರಭಾವ ಬೀರುತ್ತವೆ. ದುರ್ಜನರು ದಿಗ್ಮೂಢರಾದರೆ, ಸಜ್ಜನರು ಶಾಂತಿ ನೆಮ್ಮದಿ ಕಾಣುತ್ತಾರೆ. ಪುನಃ ಪ್ರಪಂಚದಲ್ಲಿ ಬುದ್ಧಿವಂತರು ಹಾಗೂ ಪ್ರಜ್ಞಾವಂತರಾದವರೆಲ್ಲರೂ ಸನಾತನ ಧರ್ಮ ಸಂಸ್ಕೃತಿಯ ಪರವಾಗಿ ನಿಲ್ಲುತ್ತಾರೆ. ವಿಶ್ವಜೀವನಕ್ಕೆ ಆರೋಗ್ಯಕರ ಸಮಾಜದ ಸತ್ಯ ದರ್ಶನ ಮಾಡಿಸುತ್ತಾರೆ" ತ್ರಿಕಾಲಜ್ಞಾನಿಗಳಾದ ನಾರದರೆಂದರು.

"ಹೌದು, ನಾರದ ಸನಾತನ ಧರ್ಮವೆಂದರೆ ಸಭ್ಯಜೀವನ ಧರ್ಮ. ಅದು ಮನುಷ್ಯರೆಲ್ಲರಿಗೂ ಒಂದೇ ಧರ್ಮ. ಧರ್ಮದ ಉತ್ಕೃಷ್ಟತೆಯನ್ನು ಇಡೀ ಲೋಕವೇ ಕೊಂಡಾಡಿದಾಗ ಅದರ ಮಹತ್ವದ ಅರಿವಾಗುತ್ತದೆ. ಅದಕ್ಕಾಗಿಯೇ ಪ್ರಪಂಚದಲ್ಲಿ ಯಾವಾಗಲೂ ಸಾತ್ವಿಕರು ಸಜ್ಜನರು ಧರ್ಮವೆಂಬ  ದೀಪಕ್ಕೆ ನಿಸ್ವಾರ್ಥ ಸೇವೆಯ ತೈಲವೆರೆಯುತ್ತಾರೆ. ಕಾಲಸಂದಂತೇ ಸಂತರು, ಮಹಾತ್ಮರು ಯುಗಪುರುಷರೂ ಹುಟ್ಟಿ ಬರುತ್ತಾರೆ. ಪ್ರಾಜ್ಞರು ಪ್ರತಿಭಾನ್ವಿತರು, ಪಂಡಿತರು ಮತ್ತು ಮೇಧಾವಿಗಳು ತಮ್ಮ ಕೃತಿಗಳಿಂದ ಧರ್ಮಕ್ಕೆ ಹೊಸ ಬೆಳಕು ಚೆಲ್ಲುತ್ತಾರೆ" ಸರಸ್ವತಿ ದೇವಿ ಗಾಂಭೀರ್ಯದಿಂದ ನುಡಿದಳು.


"ಹೌದು ನಾರದ! ಸೃಷ್ಟಿ ಸಮಷ್ಟಿಯಲ್ಲಿ ಕಾಣುವ ಅತಿ ಸೋಜಿಗದ ಸಂಗತಿಯೇ ಅದಾಗಿರುತ್ತದೆ. ಅಲ್ಲದೇ ಧರ್ಮದ ಪುನರುತ್ಥಾನವಾಗಲೆಂದೇ ಭೂಲೋಕದಲ್ಲಿ ನಿತ್ಯವೂ ಪೂಜೆ ಪುನಸ್ಕಾರಗಳು, ಹೋಮ ಹವನಗಳೂ ಜರುಗುತ್ತಲೇ ಇರುತ್ತವೆ" ಬ್ರಹ್ಮದೇವರೆಂದರು.

"ಆದರೇನು! ದೈವಶ್ರದ್ಧೆ ಭಕ್ತಿಭಾವಗಳು  ಎಲ್ಲರಮೇಲೂ ಪ್ರಭಾವ ಬೀರಲಾರವಲ್ಲವೇ...? ಕೆಲ ನೀಚ ಸ್ವಾರ್ಥಿಗಳಲ್ಲಿ ಹೋಮ ಹವನ ಪೂಜಾದಿಗಳ ಆಚರಣೆಯಲ್ಲೂ ಅವರದೇ ಕೀಳು ಕಾಮನೆಗಳು ನೆರವೇರಲೆಂಬ ಸ್ವ ಇಚ್ಛೆಯೇ ಇರತ್ತದಲ್ಲ..."
"ಅದು ಅವರಿಗೇ ಅರಿಯದಂತ ಮೌಢ್ಯವೇ ಆಗಿರುತ್ತದೆಯಲ್ಲವೇ..?" ಬ್ರಹ್ಮದೇವರೆಂದರು.


"ಪಿತಾಮಹ! ಎಲ್ಲಿ ಯಜ್ಞಯಾಗಾದಿಗಳು ಜರುಗುವವೋ ಅಲ್ಲಿ ನೀವೂ ಪ್ರತಿಷ್ಠಿತರೇ ಅಲ್ಲವೇ...? ತಸ್ಜಾತ್ ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಂ..." ನಾರದರು ತಿಳಿನಗೆಯಲ್ಲೆಂದರು.
"ನಾನು ಅಲ್ಲಿ ಪ್ರತಿಷ್ಠಿತನಾಗುವುದು ಪ್ರಜಾಪಿತನಾಗಿಯಷ್ಟೇ. ಪ್ರಜೆಗಳ ಯೋಗಕ್ಷೇಮಕ್ಕಾಗಿಯೇ ಹೊರತು ಕೇವಲ ಢಂಬಾರಿಗಳಿಗಾಗಿಯಲ್ಲ..." ಬ್ರಹ್ಮದೇವರೆಂದರು ಗಂಭೀರವಾಗಿ.
"ಓಹ್ ! ನಿಮ್ಮ ಉಪಸ್ಥಿತಿಯಲ್ಲಿ ಪ್ರಜೆಗಳು ಪ್ರಭುಗಳಿಗಾಗಿ ಎಲ್ಲವೂ ವಿಧಿವತ್ತಾಗಿ ನಡೆದರೇನೆ ನಿಮಗೆ ಸಂತೋಷವೋ.."

"ನಾರದ! ಭೂಲೋಕದ ಜನರ ಸ್ವಭಾವವೇ ಹಾಗಲ್ಲವೇ? ಅವರಲ್ಲಿ ರಜೋಗುಣದ ಭಕ್ತಿಗಿಂತ ಸತ್ವಗುಣದ ಭಕ್ತಿ ಒಳ್ಳೆಯದು. ತಮೋಗುಣದ ಭಕ್ತಿಗಿಂತ ರಜೋಗುಣದ ಭಕ್ತಿ ಒಳ್ಳೆಯದು. ತಮೋಗುಣದ ಭಕ್ತಿಯಲ್ಲಿ ಸ್ವಾರ್ಥ ಸುಖಲಾಲಸೆಯೇ. ಅವರಲ್ಲಿ ಅಸುರರೂ ಇರುತ್ತಾರೆ. ರಜೋಗುಣದ ಭಕ್ತಿಯುಳ್ಳವರು ಸಾಧಾರಣರು. ಸತ್ವಗುಣದ ಭಕ್ತಿಯುಳ್ಳವರಲ್ಲಿ ಅಸಾಧಾರಣರು. ಈ ಮೂರೂ ಗುಣಸ್ವಭಾವಗಳಲ್ಲಿ ಚಂಚಲ ಚಿತ್ತರೂ ಇರುತ್ತಾರೆ. ಅಸುರರಲ್ಲಿ ಮಹಾನ್ ಶಕ್ತಿ ಶಾಲಿಗಳು, ಸಂತರಲ್ಲಿ ಮಹಾಮಹಿಮಾನ್ವಿತರು ಸದೃಢ ಸಮಚಿತ್ತರೂ ಇರುತ್ತಾರೆ ಅಲ್ಲವೇ...? ಯಾವಾಗಲೂ ಸಾತ್ವಿಕರು ಸತ್ವಗುಣಾಢ್ಯರು ಮತ್ತು ಸಂತರು ತಮಗೆ ಮಾತ್ರವಲ್ಲ ದೇಶಕ್ಕೇ ಒಳಿತನ್ನು ಹಾರೈಸುತ್ತಿರುತ್ತಾರೆ" ಬ್ರಹ್ಮದೇವರೆಂದರು.



"ಹೌದು ಪಿತಾಮಹ! ಸತ್ ಚಿತ್ ಪ್ರೇರಣೆಯಿಂದ  ದೇಶಕ್ಕೆ ಒಳಿತಾಗಲೆಂದೇ ಭರತಖಂಡದ ತಪೋವನದಲ್ಲಿ ಮಹಾಯಜ್ಞಕ್ಕೆ ಸಿದ್ಧತೆಗಳು ನಡೆದಿವೆ. ದೇಶ ವಿದೇಶಗಳಿಂದ ಸಂತರೂ, ರಾಜ ಮಹಾರಾಜರುಗಳೂ, ಸಮಸ್ತ ಪ್ರಜೆಗಳೂ ಭಾಗಿಗಳಾಗಲಿದ್ದಾರೆ. ಆದರೆ, ನನಗೊಂದು ಸಂದೇಹ ಪಿತಾಮಹ..."
"ದೇವ ಋಷಿಗೆ ಸಂದೇಹವೇ? ಅದೇನು...?
"ಸಂತ ಮಹಾಮಹಿಮರೂ, ಋಷಿ ಮಹರ್ಷಿಗಳೊಂದಿಗೆ ಸಮಸ್ತರೆಲ್ಲರೂ ಸೇರಿ ಲೋಕಕಲ್ಯಾಣಾರ್ಥವಾಗಿಯೇ ಮಹಾಯಜ್ಞವನ್ನೇನೋ ಆಚರಿಸುತ್ತಾರೆ. ಆದರೆ, ಯಜ್ಞಫಲದ ಹವಿಸ್ಸನ್ನು ಎಲ್ಲದೇವಾನು ದೇವತೆಗಳ ಪ್ರೀತ್ಯರ್ಥ ಅರ್ಪಿಸುವರೋ ಅಥವಾ ಸಮಷ್ಟಿಯ ಮೂಲಾಧಾರ ಸತ್ ಶಕ್ತಿಗೆ ಏಕೈಕ ಸ್ವರೂಪನಾದ  ದೇವನೊಬ್ಬನಿಗೇ ಅರ್ಪಿಸುವರೋ ಎಂಬುದೇ ಸಂದೇಹಾಸ್ಪದವಾಗಿದೆ" ನಾರದರೆಂದರು.

ಬ್ರಹ್ಮದೇವರು ಕಿರುನಗೆ ಬೀರಿ ಹೇಳಿದರು-
"ದೇವ ಋಷಿಗಳೇ, ಒಂದೆಡೆ ನಿಷ್ಕಾಮ ಕರ್ಮಿಗಳು ಸತ್ ಸಂಕಲ್ಪದಿಂದ ಮಾಡುವ ದೇವತಾ ಕಾರ್ಯಗಳನ್ನು ಸಮಷ್ಟಿಯಲ್ಲಿ ಜಗತ್ತಿಗೆ ಶುಭವಾಗಲೆಂದೇ ಮಾಡುತ್ತಾರೆ. ಅದರ ಫಲವು ಸರ್ವಗೋಚರವಾದರೂ ಅಗೋಚರವೆನಿಸಿರುವ ಸತ್ ಶಕ್ತಿಗೇ ಮೀಸಲೆಂದು ಭಾವಿಸುತ್ತಾರೆ. ಇನ್ನೊಂದೆಡೆ ಪಾಪಭೀತಿಯೇ ಇಲ್ಲದ ದೊರೆಗಳು, ಪ್ರಜೆಗಳಲ್ಲಿ ದುಷ್ಟಜನರು ತಮ್ಮದೇ ಅನಾಚಾರ ಅಕ್ರಮಗಳಿಗೇ ಪುಣ್ಯಫಲ ಬಯಸಿ ಯಜ್ಞಯಾಗಾದಿ ಪೂಜೆಗಳನ್ನು ನೆರವೇರಿಸುವವರಿರುತ್ತಾರೆ. ಕೆಲವೊಮ್ಮೆ ಭೂಲೋಕದ ರೀತಿನಿತಿಗಳೂ ವಿಚಿತ್ರವೇ. ಅದಕ್ಕೆ ವಿಚಿತ್ರ ಪ್ರಪಂಚವೆನ್ನುವುದಲ್ಲವೇ?"

"ಹಾದು, ಪಿತಾಮಹ! ಮನುಷ್ಯರಲ್ಲಿ ವಿಚ್ಛಿದ್ರಕಾರೀ ದುಷ್ಟರೂ ಪ್ರಳಯಪ್ರತಾಪಿಗಳೂ ಇರುವರು. ಅಂತೆಯೇ ಪ್ರಕೃತಿ ಪ್ರಕೋಪವಿರುವುದೇ. ಏನೇ ಆಗಲಿ ಮನುಕುಲದ ಉದ್ಧಾರಕ್ಕಾಗಿ ಬರಗಾಲವನ್ನು ನೀಗಿ ಮಳೆಸುರಿಸುವಂಥ ದೇವಾಂಶ ಸಂಭೂತರೂ ಭೂಲೋಕದಲ್ಲಿ ಇರುವರಲ್ಲವೇ... ಸಮಷ್ಟಿಗೆ ಮಂಗಳವಾಗುವುದನ್ನೇ ಸ್ವೀಕರಿಸಿ ಜಗದ ಅಸ್ತಿತ್ವವನ್ನು ಕಾಪಾಡುವ ಪ್ರಜಾಪಿತ ನೀನೇ ಅಲ್ಲವೇ..? ನಾರದರೆಂದರು.

"ಅದು ಹಾಗಲ್ಲ ನಾರದ! ಸೃಷ್ಟಿಕರ್ತನಾಗಿ ನಾನು ನಿಮಿತ್ತ ಮಾತ್ರನೇ. ಪ್ರಾಕೃತಿಕವಾದ ಸೃಷ್ಟಿನಿಯಮಗಳಿಗೆ ನಾನೂ ಬದ್ಧನೇ. ಜಗತ್ತಿನಲ್ಲಿ ಧರ್ಮಸಂಸ್ಥಾಪನೆಗೆ ಸ್ಥಿತಿ ಸಂರಕ್ಷಣೆಗೆ ಸತ್ ಸ್ವರೂಪಿಯೊಬ್ಬನಿರುವನು. ಲಯಕ್ಕೆ ಕಾರಣನೂ ಇನ್ನೊಬ್ಬನಲ್ಲವೇ.. ನಿನಗೆ ತಿಳಿಯದೇನು! ಭೂಲೋಕದಲ್ಲಿ ಮಹಾಯಜ್ಞ ನಡೆಯುವ ತಪೋವನಕ್ಕೇ ಹೋಗು ನಾರದ. ಅಲ್ಲಿ ಜಗದೈಕ ಅಸ್ತಿತ್ವಕ್ಕೇ ಕಾರಣನು ಯಾರೆಂಬ ಸತ್ವಪರೀಕ್ಷೆಗೆ ನಾಂದಿಯಾಗಲಿ..." ಎಂದ ಬ್ರಹ್ಮದೇವರು ಗಂಭೀರ ಮುದ್ರೆತಾಳಿದರು.

ಆ ಸತ್ವಪರೀಕ್ಷೆಯು ತನಗೇ ಮೊದಲು ಆಗುವುದೆಂದು ಆ ಪರಬ್ರಹ್ಮನಿಗೂ ತಿಳಿಯದೇ ಹೋದದ್ದು ಜಗನ್ನಿಯಾಮಕ ಲೀಲೆಯೇ.." 

ಧ್ಯಾಯ-೧ ಮುಗಿಯಿತು.

ಶನಿವಾರ, ಆಗಸ್ಟ್ 9, 2014

ಬ್ರಹ್ಮನಿಗೂ ಭವಲೋಕದ(ಭೂಲೋಕದ) ಚಿಂತೆ-೨


ಇದೇನು ತ್ರಿಗುಣಾತ್ಮಕ ಪ್ರಪಂಚದ ಮಾಯೆಯೋ...ಯುಗಯುಗಳಲ್ಲಿ ಆಗುವ ಪರಿವರ್ತನೆಗೆ ನಾಂದಿಯೋ...  ಓಹ್, ಕಲಿಯುಗದಲ್ಲಿ ಸಹಸ್ರ ವರ್ಷಗಳಿಗೊಮ್ಮೆ ಪಾದಪಾದಗಳಲ್ಲಿ ಧರ್ಮವು ಕುಸಿಯುವುದೂ ಜಗನ್ನಿಯಾಮಕವೇ ಆದರೂ  ಎಂದಿಗಾದರೂ ತ್ರಿಗುಣಗಳು ಸಪ್ರಮಾಣದಲ್ಲಿ ಇರಲೇಬೇಕಲ್ಲ...
ಸಜ್ಜನ ಸಂಖ್ಯೆಯೇ ಕ್ಷೀಣಿಸಿಬಿಟ್ಟರೆ ಸತ್ ಶಕ್ತಿಯೇ ಕಳಾಹೀನವಾದರೆ ಮುಂದೆ ಹೇಗೆ....? ಆಗುವುದೇನಿದ್ದರೂ ಅಕಾಲದಲ್ಲಿ ಆಗಬಾರದಷ್ಟೇ. ಯುಗಪರಿವರ್ತನೆಗೂ ಬಲವತ್ತರವಾದ ಕಾರಣಗಳಿರುವುದೇ ಆದರೇನು! ಅದು ಆಗುವ ಕಾಲಕ್ಕೇ ಆಗಬೇಕಲ್ಲ... ಅತಿ ವೇಗಗತಿಯಲ್ಲಿ ವೈಜ್ಞಾನಿಕವಾಗಿ ಮುಂದುವರೆದಿರುವ ಈ ಕಲಿಯುಗವು  ವಿಶೇಷ ಯುಗವಾಗದೇನೆ ಅಷ್ಟೇ ವೇಗಗತಿಯಲ್ಲಿ ಅವನತಿ ತಂದುಕೊಳ್ಳಬಾರದಲ್ಲ....
ಸತ್ಯ ಲೋಕದಲ್ಲಿ ಗಂಭೀರ ಮೌನವೇ ನೆಲೆಸಿದೆ. ಇಂದ್ರಾದಿ ದೇವತೆಗಳು ತವಕದಿಂದ ಇದ್ದಾರೆ. ಅಷ್ಟ ದಿಕ್ಪಾಲಕರು ತಲ್ಲಣಿಸಿದ್ದಾರೆ. ಸಪ್ತ ಋಷಿಗಳು ದಿಗ್ಮೂಢರಂತಾಗಿದ್ದಾರೆ. ಪದ್ಮಾಸನದಲ್ಲಿದ್ದ ಬ್ರಹ್ಮದೇವ ಸುಪ್ರಸನ್ನಃ ನಾಗಲಿಲ್ಲ. ಅವನ "ಚಿತ್" ಅನಿತ್ಯದತ್ತ ಪಯಣಿಸಿದೆ. ಅಲ್ಲೇಲ್ಲೋ ಸತ್ ಶೋಧನಗೆ ತೊಡಗಿದೆ.

ಎಲ್ಲರೂ  ಜಗಜ್ಜನನಿ ಸರಸ್ವತಿ ದೇವಿಗೇ ಮೊರೆ ಇಟ್ಟಿದ್ದಾರೆ....

ಮೌನ ಮುರಿದ ಸರಸ್ವತಿ ದೇವಿ ತನ್ನ ಪತಿ ಬ್ರಹ್ಮದೇವರಿಗೆ ಮೆಲ್ಲನೆ ಕೇಳಿದ್ದಾಳೆ....

"ಸ್ವಾಮಿ, ಪ್ರಸನ್ನ ಚಿತ್ತರಾಗಬಾರದೇ ? ನಿಮ್ಮ ಅಂತರಂಗದ ಹೋರಾಟಕ್ಕೆ ನಿಮ್ಮ ಶೃತಿ ಸೂತ್ರಗಳು ಉತ್ತರಿಸದಿರುವುದೂ ಇದೆಯೇನು...?"
"ದೇವಿ, ಧರ್ಮಜಿಜ್ಞಾಸೆಯಲ್ಲಿ ಶ್ರುತಿಗಳೇ ಪ್ರಮಾಣ. ಬ್ರಹ್ಮ ಜಿಜ್ಞಾಸೆಯಲ್ಲಿ ಶ್ರುತಿಗಳ ಜೊತೆಗೆ ಅನುಭವವೂ ಪ್ರಮಾಣ. ಬ್ರಹ್ಮತತ್ವವು ಭೂತ ವಸ್ತುವಾಗಿದೆ. ಅಲ್ಲಿ ವಸ್ತುತಂತ್ರವಿದೆ. ಅದರ ಮೇಲೆ ಪುರುಷ ತಂತ್ರದ ಕೈವಾಡವಿದೆ" ಬ್ರಹ್ಮ ದೇವ ಹೇಳಿದನು.

"ಸ್ವಾಮಿ, ಪ್ರಕೃತಿ-ಪುರುಷ ವ್ಯಾಪಾರ ಕ್ಷೇತ್ರವೇ ಜಗತ್ತು ಅಲ್ಲವೇ? ಅಲ್ಲಿ ಏನೆಲ್ಲ ತಾಂತ್ರಿಕತೆಯಲ್ಲೂ ತತ್ವಾನುಭವವೇ ಕಡೆಗೆ ಪಾಠ ಕಲಿಸುವುದಲ್ಲವೇ..?"

"ನೋಡು, ಜಗತ್ತು ನಿಲ್ಲದೇ ನಡೆಯುತ್ತಿರುವುದು. ಅಂದರೆ, ಜಗತ್ತು ಓಡುತ್ತಿದೆ. ಪರಿವರ್ತನೆ ಜಗದ ನಿಯಮ. ಅದು ಪ್ರಾಕೃತಿಕವಲ್ಲದೇ ಮಾನವ ನಿರ್ಮಿತವೂ ಆಗಿರುತ್ತದೆ. ಮನುಷ್ಯ ರಾಗದ್ವೇಷಗಳನ್ನು ಜಯಿಸಿದಾಗಲೇ ಅವನ ಪುರುಷತಂತ್ರವು ಸತ್ವಪೂರ್ಣವಾಗುತ್ತದೆ."

"ಲೋಕಜೀವನದಲ್ಲಿ ಮನುಷ್ಯ ಧರ್ಮಬಾಹಿರನಾಗಬಾರದು. ಧರ್ಮದಲ್ಲಿ ನ್ಯಾಯ ನೀತಿ ಇದೆ. ಅದು ಎಲ್ಲರಿಗೂ ಒಂದೇ. ಧರ್ಮ ಇರುವಲ್ಲಿ ಸತ್ಯಸೌಂದರ್ಯವಿದೆ. ಧರ್ಮಕ್ಕೆ ತಲೆಬಾಗಿ ನಡೆದುಕೊಂಡರೆ, ಅಶಾಂತಿ ಎಂಬುದಿಲ್ಲ. ವಿಜ್ಞಾನ ತಂತ್ರಜ್ಞಾನದಲ್ಲಿ ಬೆಳೆಯಬಲ್ಲ ಮನುಷ್ಯನಿಗೆ ಇದು ತಿಳಿಯದೇ ಸ್ವಾಮಿ."

"ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ" ಅಂದರೆ, ಜಗತ್ತಲ್ಲ ನಿಂತಿರುವುದು ಧರ್ಮದಿಂದಲೇ. ಧರ್ಮವು ಬೂದಿ ಮುಚ್ಚಿದ ಕೆಂಡದಂತೇ ಇರುತ್ತದೆ. ಅದನ್ನು ಆಗಾಗ್ಗೆ ಕೆದಕುತ್ತ ಅಧರ್ಮವನ್ನು ಸುಡಬೇಕು. ಅದಕ್ಕಾಗಿ ಪುರುಷತಂತ್ರ ಇರಬೇಕು; ಇರುತ್ತದೆ. ಅಂತಹ ಧರ್ಮನಿಷ್ಠರಿಂದಲೇ ಪುರುಷತಂತ್ರವೂ ಪೌರುಷೇಯವಾಗುತ್ತದೆ" ಬ್ರಹ್ಮದೇವ ಹೇಳಿದನು.

"ಸ್ವಾಮಿ, ಪುರುಷ ತಂತ್ರವು ಪೌರುಷೇಯವಾಗುವುದೆಂದರೇನು!" ಕೇಳಿದಳು ಮಾತೆ ಸರಸ್ವತಿ.

"ಪ್ರಕೃತಿಯಲ್ಲಿ ಬದಲಾಗದಿರುವ ಗುಣಲಕ್ಷಣಗಳನ್ನು ಹೊಂದಿರುವ ವಸ್ತುಗಳಿವೆ. ಅವು ಭೂಮಿ, ನೀರು, ಅಗ್ನಿ, ಅರಣ್ಯ ಮುಂತಾದವುಗಳು. ಹಾಗೂ ನಮ್ಮ ದೇಹಪ್ರಕೃತಿ ಕೂಡ.  ಇವೆಲ್ಲ ವಸ್ತುತಂತ್ರ ಹೊಂದಿವೆ. ಮನುಷ್ಯ ಅವುಗಳ ಶಕ್ತಿ-ಸೌಂದರ್ಯವನ್ನು ಬೆಳಕಿಗೆ ತಂದು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡರೆ, ಅವನಿಂದ ವಸ್ತುತಂತ್ರವು ಪುರುಷತಂತ್ರವಾಗಿ ಪೌರುಷೇಯವಾಗುತ್ತವೆ. ಹಾಗಲ್ಲದೇ, ಕಾಮನೆ ಕಾಂಚಣಗಳಿಂದ ಅತಿಸುಖಲಾಲಸೆ ಲೋಭಗಳಿಂದ ಅವುಗಳ ಮೇಲೇ ದುರಾಕ್ರಮಣ ಮಾಡಿದರೆ ನಾಶಹೊಂದುತ್ತಾನೆ." ಬ್ರಹ್ಮ ಹೇಳಿದನು.

"ಯಾಕೆಂದರೆ, ಮನುಷ್ಯರಲ್ಲಿ ರಜೋಗುಣ ಮತ್ತು ತಮೋಗುಣ ಸ್ವಭಾವಗಳಿಂದ ಇಂದ್ರಿಯಗಳ ವಶವಾಗುವರೇ ಬಹಳವಲ್ಲವೇ ಸ್ವಾಮಿ. ಹಾಗಾಗಿ ಅವರು ಕಾಮ ಲೋಭ ಪೀಡಿತರಾಗುತ್ತಾರೆ." ಸರಸ್ವತಿ ನಸುನಕ್ಕು ನುಡಿದಳು.

"ಜಗತ್ತಿನ ಉಳಿವಿಗೆ ಪುರುಷತಂತ್ರವೂ ಮುಖ್ಯವಲ್ಲವೇ ದೇವಿ! ಅದು ಪೌರುಷೇಯ ವಾಗುತ್ತಿರಬೇಕಷ್ಟೇ. ಮನುಷ್ಯರಲ್ಲಿ ಮನಸ್ಸು ಇಂದ್ರಿಯಗಳ ವಶವಾಗದ ಹಾಗೆ ಪ್ರಜ್ಞಾವಂತಿಕೆ ಹಾಗೂ ಬುದ್ಧಿವಂತಿಕೆಯುಳ್ಳ ಸತ್ವಗುಣ ಸಾಧಕರಿಂದಲೇ ನಿಸರ್ಗದ ನಿಯಮಗಳು ಪೋಷಿಸಲ್ಪಡುತ್ತವೆ. ಅವರಲ್ಲಿ ಕೆಲ ವೈಜ್ಞಾನಿಕರೂ ಇರುವುದು ಸೋಜಿಗವೇ. ಆದರೆ, ಅವರೆಲ್ಲರ ಕಾರ್ಯಕ್ಕೆ ಭಂಗ ಉಂಟಾಗಬಾರದಲ್ಲ..." ಬ್ರಹ್ಮ ಗಂಭೀರವಾಗಿ ನುಡಿದನು.

"ಸ್ವಾಮಿ, ನೀವು ಸೃಷ್ಟಿವಿಧಾತರು. ಜಗತ್ತಿನಲ್ಲಿ ಸತ್ವಗುಣದ ಸಮತೋಲನವನ್ನು ಉಂಟುಮಾಡುವ ವಿಧಾನವನ್ನೂ ಬಲ್ಲವರಲ್ಲವೇ...? ಜಗಜ್ಜನನಿ ಸರಸ್ವತಿ ಅರ್ಥಗರ್ಭಿತ ನಗೆ ಬೀರಿದಳು.

"ಉಹ್ಞೂಂ, ಎಲ್ಲಬಲ್ಲವನು ನಾನೆಂಬುದೇ ತಪ್ಪು. ನನಗೆ ತಿಳಿದಿದೆ ಎಂದ ಮಾತ್ರಕ್ಕೆ ಅದು ನನ್ನಿಂದಲೇ ಸಾಧ್ಯವಾಗುವುದೆಂದು ಹೇಳಲಾಗದು ದೇವಿ."

"ಹಾಗಾದರೆ, ನೀವು ಚಿಂತಿಸುವುದಕ್ಕೇನಿದೆ ಹೇಳಿ..."

"ಮುಂದೇನು ಆಗಲಿದೆಯೋ ಅದರಲ್ಲಿ ನಾನೂ ಭಾಗಿಯೇ. ಅದು ಹೇಗೆಂಬುದು ನನಗೂ ತಿಳಿದಿಲ್ಲವೆಂದರೆ ನಿನಗೆ ಆಶ್ಚರ್ಯವಾದೀತು" ಬ್ರಹ್ಮದೇವ ನಸುನಕ್ಕನು.

"ಅರ್ಥವಾಯಿತು ಬಿಡಿ. ಮುಂದೆ ನಡೆಯುವುದೇನಿದ್ದರೂ ನಡೆದೇ ತಿರುತ್ತದೆ. ಅದರಲ್ಲಿ ನೀವೂ ಭಾಗಿಗಳೇ.. ಅಂದಮೇಲೆಆಗುವುದೆಲ್ಲ ಒಳ್ಳೆಯದಕ್ಕೇ ಅಲ್ಲವೇ...?" ಸರಸ್ವತಿ ದೇವಿ ಸಾಂತ್ವನಗೈದಳು.

ಅದೇ ಸಮಯಕ್ಕೆ ನಾರದರ ಪ್ರವೇಶವಾಯಿತು.

ನಾರದರು ದೇವರ್ಷಿಗಳು. ತ್ರಿಕಾಲಜ್ಞಾನಿಗಳು. ತ್ರಿಲೋಕ ಸಂಚಾರಿಗಳು. ಭೂತ ಭವಿಷ್ಯತ್ತುಗಳಿಗೆ ಭಾಷ್ಯ ಬರೆದವರು. ಬ್ರಹ್ಮನ ವರಪುತ್ರರು. ಎಲ್ಲ ದೈವಿಕ ಮತ್ತು ಪ್ರಾಪಂಚಿವಾದ ಪರಿವರ್ತನೆಗಳಲ್ಲಿ ಅವರ ಪಾತ್ರವು ಪ್ರಮುಖವಾದದ್ದು. ಪುರಾಣಕಥೆಗಳಲ್ಲಿ ಪ್ರಧಾನ ಸೂತ್ರ ಧಾರನದು. ಅವ್ಯಕ್ತ ಪ್ರೇರಣೆಯಲ್ಲಿ ಕೂಡಲೇ ಕಾರ್ಯೋನ್ಮುಖರಾಗುವರು. ಇದೀಗ ಬ್ರಹ್ಮನಿಗೆ ಅಭಿವಾದನ ಮಾಡಿದರು. ಮಾತೆ ಸರಸ್ವತಿಗೂ ಕೂಡ. ಬ್ರಹ್ಮದೇವನ ಗಾಂಭೀರ‍್ಯವು ಸಡಿಲಗೊಳ್ಳಲಿಲ್ಲ. ತಮ್ಮನ್ನು ಆದರಿಸಬೇಕೆಂದು ಅವರು ಅಪೇಕ್ಷಿಸಿ ಬಂದವರಲ್ಲವಲ್ಲ... ಎಷ್ಟೇ ಆಗಲಿ, ಅದು ಮಾತಾಪಿತೃಗಳ ಸನ್ನಿಧಾನ.

ಪ್ರಾಪಂಚಿಕ ಪರಿವರ್ತನೆ ಸುಧಾರಣೆಯಲ್ಲಿ ತಾವು ಮಾಡುವುದು ಪುಣ್ಯಕಾರ್ಯ. ದೇವೋಪಾಸನೆಯಲ್ಲಿ ಭಕ್ತಿಭಾವದ ಪರಾಕಾಷ್ಠೆಯಲ್ಲಿ ದೇವಾಸುರರಿಗೆಲ್ಲ ತಾವು ಮಾರ್ಗಪ್ರವರ್ತಕರಾಗಿದ್ದರೆ ಅದು ತಮ್ಮ ಸುದೈವವೆಂದೇ ತಿಳಿದವರು.

ನಾರದರು ಮುನ್ನಡೆದು ಆಸನಾರೂಢರಾದರು.  ಮಾತಾಪಿತೃಗಳ ಕಡೆಗೊಮ್ಮೆ ಸುದೀರ್ಘ ನೋಟ ಹರಿಸಿ,

"ಅದೇನು ಇಬ್ಬರೂ ಗಂಭೀರ ಚಿಂತೆಯಲ್ಲಿ ಮುಳುಗಿದ್ದೀರಿ..?" ಅಂದರು.

"ನಾರದ! ನಿನಗೆ ತಿಳಿಯದಿರುವುದೇನಿದೆ? ಭೂಲೋಕದ ಸ್ಥಿತಿಗತಿಗಳು. ಆಗಾಗ್ಗೆ ತಲೆದೋರುವ ಅವ್ಯವಸ್ಥೆಗಳು. ಸಜ್ಜನರೆಲ್ಲ ದೈವನಂಬಿಕೆಯಲ್ಲಿ ಎಂದಿಗಾದರೂ ತಮಗೆ ಒಳಿತಾಗುವುದೆಂದೇ ಆತ್ಮವಿಶ್ವಾಸ ಹೊಂದಿದವರು. ಅವರೆಂದಿಗೂ ಹತಾಶರಾಗಬಾರದಲ್ಲ.... ಕಡುಕಷ್ಟಪಡುವವರು ಕ್ರುದ್ಧರಾಗಿ ಅಡ್ಡದಾರಿ ಹಿಡಿದು ಭ್ರಷ್ಟರಾಗಿ ಮೋಸ ವಂಚನೆ, ಕಳ್ಳತನಗಳಿಗೆ ಮನಗೊಡಬಾರದು. ಕ್ರೂರಿಗಳಾಗಿ ಕೊಲೆಗಡುಕರಾಗಬಾರದು. ಕಲಿಯುಗದಲ್ಲಿ  ಕೇಡುಮಾಡುವವರಿಗೇ ಕಾಲ ಎಂದಾಗಬಾರದಲ್ಲವೇ..?"

"ಪಿತಾಮಹ!  ಲೋಕದಲ್ಲಿ ಜನಸಂಖ್ಯೆ ಹೆಚ್ಚಿದಂತೆಲ್ಲ ಜನರ ಅಜ್ಞಾನ ಅಂಧಕಾರಗಳೂ ಹೆಚ್ಚುವುವು. ಧರ್ಮವು ದಿನೇ ದಿನೇ ಕ್ಷಯಿಸುವುದು. ಹೀಗೆಯೇ ಧರ್ಮವು ಅಧೋಗತಿಗಿಳಿದು ಪೂರ್ಣನಾಶವಾದರೆ ಸೂರ್ಯೋದಯ ಸೂರ್ಯಾಸ್ಥಗಳೇ ಇರುವುದಿಲ್ಲ. ಜಗತ್ತು ತನ್ನ ಚಲನೆಯನ್ನೇ ನಿಲ್ಲಿಸಿ, ಭೂಮಿ ತನ್ನ ಅಕ್ಷದಮೇಲೆ ತಿರುಗದೇ ಧಗಧಗಿಸೀತಲ್ಲವೇ...?"

"ನಾರದ, ದುರ್ಜನರು ಧನಬಲ ದೇಹಬಲವೇ ಎಲ್ಲದಕ್ಕೂ ಮಿಗಿಲೆಂದುಕೊಂಡಿದ್ದಾರೆ. ಅವರ ಭಂಡತನಕ್ಕೆ ಅಸತ್ಯ, ಅಕ್ರಮ ಅವ್ಯವಹಾರಗಳಿಗೆ ಧರ್ಮವೇ ನಲುಗುವುದೆಂದರೇನು!"

"ಹೌದು ಪಿತಾಮಹ!  ದುರ್ಜನರು ಮಾಡಬಾರದ ಪಾಪಕೃತ್ಯಗಳನ್ನು ಮಾಡುತ್ತಾರೆ.  ಅವುಗಳಿಗೆ ಪುಣ್ಯಫಲ ಬಯಸುತ್ತಾರೆ. ತಾವೂ ಕಷ್ಟಪಡದೇ ಕಷ್ಟಪಟ್ಟು ದುಡಿಯುವವರನ್ನೂ ಶೋಷಣೆ ಮಾಡುತ್ತಾರೆ. ಹೆಣ್ಣನ್ನು ಭೋಗವಸ್ತುವೆಂದೇ ಬಯಸುತ್ತಾರೆ. ಲೈಂಗಿಕ ಕಿರುಕುಳ ನೀಡಿ ಹಿಂಸಿಸುತ್ತಾರೆ.  ಯುವಜನಾಂಗದಲ್ಲಿ ಶೀಲಚಾರಿತ್ರ‍್ಯಗಳು ಕಾಣೆಯಾಗುತ್ತಿವೆ. ಸ್ವಚ್ಚಂಧ ಪ್ರವೃತ್ತಿ ಸ್ವೇಚ್ಚಾಚಾರಗಳು ಹೆಚ್ಚಿವೆ. ಹರೆಯದ ಮಕ್ಕಳೇ ಹೆತ್ತವರಿಗೆ ಶತ್ರುಗಳಂತೆ ಕಾಣಿಸುವುದೂ ಶೋಚನೀಯವೇ..  ಮನುಷ್ಯನೂ ಒಂದು ಪ್ರಾಣಿ ಪಶು. ಅವನಿಗೇಕೆ ಜೀವನಮೌಲ್ಯಗಳೆಂಬ ಭಂಡತನದಿಂದ ಇರುವವರಿಂದಾಗಿಯೇ ಜನಜೀವನದಲ್ಲಿ ಕೋಲಾಹಲವೇ...ವಾಸಿಯಾಗದ ರೋಗರುಜಿನಗಳು ಇಲ್ಲವೇ ಇಲ್ಲವೆಂದರೂ ಮತ್ತೆ ಮತ್ತೆ ಬಿಟ್ಟೂ ಬಿಡದೇ ಬಾಧಿಸುತ್ತಿವೆಯಾದರೂ ಮನುಷ್ಯ ಮನುಷ್ಯನಾಗಿ ಬದುಕಲಿಚ್ಛಿಸಲಾರನೇಕೆ..?  ಪಣ್ಯಭೂಮಿ ಎಂದೇ ಹೆಸರಾದ ಭರತಖಂಡದಲ್ಲಿ ಇದೇನು ಕಲಿಗಾಲವೋ... ಕಲಿಪ್ರವೇಶವಾಗಿರುವ ಸೂಚನೆಯೇ..?"

ಈಗ ಮಾತೆ ಸರಸ್ವತಿ ನಸುಕೋಪದಿಂದಲೇ ಹೇಳಿದಳು-

"ನಾರದ, ಮೇಲೇರಿದ ಮೇಲೆ ಕೆಳಗಿಳಿಯುವುದು ಸಹಜವೆಂಬಂತೇ ಯಾವ ನೆಲದಲ್ಲಿ ಶ್ರೇಷ್ಠವೆನಿಸಿದ ಸನಾತನ ಧರ್ಮವು ಉಚ್ಚಸ್ಥಾನದಲ್ಲಿರುವುದೋ ಅದು ಒಂದೊಮ್ಮೆ ನೀಚ ಸ್ಥಾನವನ್ನೂ ಕಾಣುವುದಾಗಬೇಕಲ್ಲ.... ಎಲ್ಲಿ ಹೆಣ್ಣು ಗಂಡುಗಳ ನಡುವೆ ಅನೈತಿಕತೆ ಭೂತ ನರ್ತನ ಗೈಯುವುದೋ, ಎಲ್ಲಿ ಭ್ರಷ್ಟರ, ದುಷ್ಟರ ಅಟ್ಟಹಾಸ ಮೇರೆಮೀರಿ ಮೆರೆವುದೋ, ಎಲ್ಲಿ ಮನುಷ್ಯರ ಹಣವವೇ ಅವರನ್ನು ಅಣಕವಾಡುವುದೋ  ಅಲ್ಲಿ ಭೂದೇವಿ ಕೆರಳುತ್ತಾಳೆ. ಬರಗಾಲಗಳು ಕಾಡುತ್ತವೆ. ಚಂಡ ಪ್ರಚಂಡ ಬಿರುಗಾಳಿ, ಮಳೆಗಳಿಂದ ಭೂಮಿ ಕಂಪಿಸುತ್ತದೆ. ನದಿಗಳು ಸೊಕ್ಕಿ ಪ್ರವಾಹದಿಂದ ಬೋರ್ಗರೆಯುತ್ತವೆ. ವಸ್ತುತಂತ್ರಜ್ಞರೂ ಊಹಿಸರದಷ್ಟು ಭೀಕರ ಅನಾಹುತಗಳು ಸಂಭವಿಸುತ್ತವೆ. ನ್ಯಾಯ ನೀತಿಪರರು, ಸಕಲಶಾಸ್ತ್ರಕೋವಿದರೂ ತಲ್ಲಣಿಸುವಂತೆ ಸತ್ಯ ಧರ್ಮ ಸಂಸ್ಕೃತಿಗಳನ್ನೇ ಹೀಗಳೆದ ಅಧರ್ಮಕ್ಕೆ ಪ್ರಪಂಚದಲ್ಲಿ ಭರತಖಂಡವೇ ಸಾಕ್ಷಿಯಾಗುತ್ತದೆ. ಹೀಗೆ ಭವಿಷ್ಯೋತ್ತರವಾಗಿ ಧರ್ಮಸಂಸ್ಥಾಪನೆಗೆ ಸತ್ವಗುಣ ಸತ್ ಶಕ್ತಿಗಳಿಗೇ ಪ್ರಾಧಾನ್ಯತೆ ಬರಲು ನಡಯಬೇಕಾದುದೇನೆಲ್ಲವೂ ನಡೆದೇ ತೀರುತ್ತದೆ..."
ಮಂದೆ ಓದಿ>>>>ಭವಲೋಕದ ಚಿಂತೆ-೩

ಗುರುವಾರ, ಆಗಸ್ಟ್ 7, 2014

ಅಧ್ಯಾಯ-೧. ಬ್ರಹ್ಮನಿಗೂ ಭವಲೋಕದ(ಭೂಲೋಕದ) ಚಿಂತೆ-೧

ಸೃಷ್ಟಿಕರ್ತ ಬ್ರಹ್ಮನ ಸತ್ಯಲೋಕದಿಂದಲೇ ಈ ಕಥಾನಕದ ಆರಂಭ...
ಬ್ರಹ್ಮದೇವನಿಗೆ ಭವಲೋಕದ(ಭೂಲೋಕದ) ಚಿಂತೆ... ಭೂಲೋಕದಲ್ಲಿ ಏನು ನಡೆಯುತ್ತಿದೆ...? ಮುಂದೇನಾದೀತು..?             ಸತ್ ಶಕ್ತಿ, ಸಜ್ಜನರ ರಕ್ಷಣೆ ಹೇಗೆಂಬುದೇ ಅಂದಿನ ಚರ್ಚೆಯಲ್ಲಿ ಗಂಭೀರ ವಿಷಯ. ಮೊದಲು ಜಗಜ್ಜನನಿ ಸರಸ್ವತಿಯೊಂದಿಗೆ ಸಂವಾದ ಪ್ರಾರಂಭ....

ಅದು ಕಲಿಯುಗಾರಂಭಕಾಲದ ವೇದಕಾಲ. ಇಂದಿಗಿಂತಲೂ ಸಾಕಷ್ಟು ಸಮೃದ್ಧಿ ಮತ್ತು ಸಂಪಧ್ಬರಿತ ಕಾಲ. ಜನಜೀವನದಲ್ಲಿ ಶಾಂತಿ ಸಮಾಧಾನ, ದೇವರಲ್ಲಿ ನಂಬಿಕೆ, ಸತ್ಯ ಧರ್ಮಕ್ಕೆ ತಲೆಬಾಗುವಿಕೆ, ಪಾಪ ಕರ್ಮಗಳಿಗೆ ಅಂಜಿಕೆ ಇತ್ತು. ಹೆಣ್ಣನ್ನು ತುಂಬ ಗೌರವದಿಂದ ಕಾಣುತ್ತಿದ್ದರು. ಹೆಣ್ಣು ತಾಯಿಯಾಗಿ, ಅಕ್ಕ ತಂಗಿಯಾಗಿ ಮಮತಾಮಯಿಯಾಗಿ, ಹೆಂಡತಿಯಾಗಿ ಸಹನೆ ಸಹಾನುಭೂತಿ ಅನುಕಂಪಗಳ ಆಗರವಾಗಿ ಅಷ್ಟೇಕೆ ಪ್ರೀತಿ ಪ್ರೇಮ ಮತ್ತು ತ್ಯಾಗಕ್ಕೆ ಇನ್ನೊಂದು ಹೆಸರೇ ಅವಳೆಂಬತೆ ಇರುತ್ತಿದ್ದಳು. ಅವಿಭಕ್ತ ಕುಟುಂಬದಲ್ಲಿ ಒಗ್ಗಟ್ಟಿನಿಂದ ಇದ್ದು ಎಲ್ಲರೂ ದುಡಿಮೆಯಲ್ಲಿ ಹಂಚಿಕೊಂಡು ಬಾಳುತ್ತಿದ್ದರು. ಸಮಾಜದಲ್ಲಿ ಸ್ನೇಹ, ವಿಶ್ವಾಸ, ಸೌಹಾರ್ದತೆ ನೆಲೆಸಿತ್ತು. ಆಳುವ ಪ್ರಭುಗಳಲ್ಲೂ ದೈವಿಕತೆ ಧಾರ್ಮಿಕತೆಯೇ ಪ್ರಧಾನವಾಗಿತ್ತು.
ಜನರು’ರಾಜಾ ಪ್ರತ್ಯಕ್ಷ ದೇವತಾ’ ಎಂಬುದನ್ನು ರಾಜರುಗಳಲ್ಲಿ ಕಾಣಬಲ್ಲವರಾಗಿದ್ದರು.
ಹೀಗಿದ್ದೂ ಈ ಪ್ರಪಂಚದಲ್ಲಿ ತ್ರಿಗುಣಗಳ ಪ್ರಭಾವವೆಂಬುದು ಎಲ್ಲಕಾಲಕ್ಕೂ ಇರುವುದೇ ಅಲ್ಲವೇ...?


ಆ ಕಾಲದಲ್ಲಿ ಜನಸಂಖ್ಯೆ ಕಡಿಮೆ ಇದ್ದರೇನು! ಜನರಲ್ಲಿ ಸಾತ್ವಿಕತೆ ಸಭ್ಯಜೀವನದಲ್ಲಿ ಬಹಳಷ್ಟು ನಂಬಿಕೆ ಇದ್ದರೇನು! ಸಂತ ಮಹಾಮಹಿಮರ ಸತ್ ಶಕ್ತಿ ತೇಜೋಮಯವಾಗಿದ್ದರೇನು! ಕ್ಷತ್ರಿಯರಲ್ಲಿ ಧರ್ಮಬೀರುಗಳಿದ್ದರೇನು!  ರಜೋಗುಣ, ತಮೋಗುಣಗಳ ಪ್ರಭಾವವು ಹೆಚ್ಚುತ್ತಲೇ ಇತ್ತು. ಆದೆರೆ, ರಜೋಗುಣ, ತಮೋಗುಣಗಳ ಪ್ರಮಾಣವು ಎಷ್ಟಿರಬೇಕೋ ಅಷ್ಟೇ ಇರಬೇಕಷ್ಟೇ.. ಅವು  ಹೆಚ್ಚಿದಷ್ಟೂ ಜನರಲ್ಲಿ ಮೋಸ, ವಂಚನೆ, ಕಳ್ಳ ಕಾಕರಲ್ಲಿ ಕೊಲೆ ಸುಲಿಗೆ, ದರೋಡೆ, ಭ್ರಷ್ಟರ ಅನಾಚಾರ ಅವ್ಯವಹಾರಗಳು, ಕಾಮುಕರಲ್ಲಿ ಅತ್ಯಾಚರಗಳು, ದುಷ್ಟರಲ್ಲಿ -ರಾಕ್ಷಸರಲ್ಲಿ ಹಿಂಸೆ, ಕ್ರೌರ್ಯಗಳೆಲ್ಲವೂ ಆಗಾಗ್ಗೆ ತಲೆದೋರುತ್ತಿದ್ದವು. ಅವು ಮೇರೆ ಮೀರಿದಷ್ಟೂ ಜೀವಜಗತ್ತಿನ ಅಳಿವು ಉಳಿವಿನ ಪ್ರಶ್ನೆಯೇ ಕಾಡುತ್ತದಲ್ಲ...? 
ಹೀಗಾಗಿ ಬ್ರಹ್ಮನಿಗೋ ಎಂದಿಗಾದರೂ ಬಿಟ್ಟೂ ಬಿಡದ ಚಿಂತೆಯೇ... ಅಲ್ಲವೇ? ಈ ಭಂಡರು, ಪುಂಡರು, ಭ್ರಷ್ಟರು ದುಷ್ಟರು, ಭಯೋತ್ಪಾದಕರು, ಹೆಣ್ಣನ್ನು ಗೌರವಿಸದ ಕಾಮಪಿಪಾಸುಗಳು ಇವರೆಲ್ಲ ಭವರೋಗ ಪೀಡಿತರಲ್ಲಿ ಪೀಡಿತರೇ... ಇವರಿಗೆ ಭವಬಂದನ ಹರಿದುಕೊಳ್ಳುವ ಮೋಕ್ಷ ಮಾರ್ಗಕ್ಕಿಂತ ಕೀಳು ಕಾಮನೆಗಳೇ.  ರಾಜಕೀಯವಂತು ಆಡುಂಬುಲವಷ್ಟೇ ಆಗುತ್ತಿರುವುದು  ಕಾಣುತ್ತಿರುವುದೇ ಆಗಿತ್ತಲ್ಲ...
 ಲೋಕದಲ್ಲಿ ಸಾತ್ವಿಕರಿಗೆ ಸಂತರಿಗೆ ಮಹಾನುಭಾವರಿಗೆ ಸದಾ ಸತ್ವಪರೀಕ್ಷೆಯೇ... ಇದೇ ತ್ರಿಗುಣಾತ್ಮಕ ತತ್ವವೇನು? ಮನುಷ್ಯರು ದಿನೇ ದಿನೇ ಬುದ್ಧಿವಂತಿಕೆ ಪ್ರಜ್ಞಾವಂತಿಕೆಯಲ್ಲಿ ಮುಂದುವರೆಯುತ್ತಿದ್ದಾರೆ. ತಮ್ಮ ನಿತ್ಯ ಜೀವನವನ್ನು ಸುಖಮಯವಾಗಿಟ್ಟುಕೊಳ್ಳಲು ಅನೇಕ ಸೌಲಭ್ಯ ಸೌಕರ್ಯಗಳನ್ನು ಮಾಡಿಕೊಳ್ಳುತ್ತಿದ್ದಾರೆ. ವಿಶೇಷ ಜ್ಞಾನವು ವಿಜ್ಞಾನವಾಗಿ ಬೆಳೆಯುತ್ತಿದೆಯಾದರೂ ದುರಹಂಕಾರದಿಂದ ಅದರ ದುರುಪಯೋಗವೂ ನಡೆದಿದೆಯಲ್ಲ...
ಎಂದಿಗಾದರೂ ಸತ್ಯ ಧರ್ಮಕ್ಕೆ ಜಯವೇ ಎಂದೇ ತಿಳಿದೂ ತಿಳಿಯದ ಮೌಢ್ಯವೇಕೆ...?   ಪ್ರಾಕೃತಿಕ  ಭೌತಿಕವಾಗಿ ಸುಂದರವಾದ ಜೈವಿಕ ಜಗತ್ತಿನಲ್ಲಿ ವಿಷಮತೆಗೆ ದೇವರು ಹೊಣೆಯಲ್ಲ. ಈ ಜನರು ಸುಖ ಹೆಚ್ಚಿದಷ್ಟೂ ದುರಾಸೆಯಲ್ಲಿ ಕಡುಸ್ವಾರ್ಥದಲ್ಲಿ ವಿಕೃತ ಮತಿಗಳಾಗಿ ರಜೋಗುಣದ ಆವೇಶಕ್ಕೊಳಗಾಗಿ ಅನರ್ಥಕಾರಿಗಳಾಗುತ್ತಿದ್ದಾರೆ. ತಮೋಗುಣದ ತಮಂಧದ ಕೇಡಿನಲ್ಲಿ ಅವರು ನಾಶಹೊಂದುವುದಲ್ಲದೇ ಜೈವಿಕಜಗತ್ತಿನ ವಿನಾಶಕ್ಕೂ ಕಾರಣರಾಗುತ್ತಿದ್ದಾರೆ.


ಆದ್ದರಿಂದ, ಕಾಲಕಾಲಕ್ಕೆ ಜೈವಿಕಜಗತ್ತಿನ ಸಮತೋಲನಕ್ಕೆ ಸ್ಥಿತಿಸಂರಕ್ಷಣೆಗೆ ಸತ್ ಶಕ್ತಿ ಸ್ವರೂಪವು ಮೈದೋರುವುದೂ ವಿಶ್ವಸೃಷ್ಟಿಯಲ್ಲಿನ ಅಲೌಕಿಕ ಲೀಲೆಯೇ. ಇಲ್ಲಿ ಸಮಸ್ತರಿಗೂ ಭವಬಂಧನ ಹರಿದುಕೊಳ್ಳಲು ಮುಕ್ತ ಅವಕಾಶಗಳಿವೆಯಾದರೂ ಅದನ್ನು ಹರಿದುಕೊಳ್ಳುವ ಬಗೆಯಲ್ಲೂ ವಿಚಿತ್ರ ವಿಲಕ್ಷಣ ವಿಚ್ಛಿಧ್ರಕಾರೀ ನಡೆಗಳಿವೆಯಲ್ಲ...! ಸತ್ ಸಾಧಕರಾಗಲು ಸತ್ವಶಾಲಿಗಳಾಗಲು ಬಯಸುವವರೇ ವಿರಳ. ನೀಚ ಸ್ವಾರ್ಥಿಗಳು ಅವರಲ್ಲೇ ರಾಕ್ಷಸ ಪ್ರವೃತ್ತಿಯ ಕಟ್ಟಾ ದೈವಭಕ್ತರೂ ಇರುವುದೂ ಅವರುಗಳೇ ಹೆಚ್ಚುತ್ತಿರುವುದೂ ಅವರ ರೀತಿ ಕಯುಕ್ತಿಗಳೇ ನೀತಿಯಂತೇ ಸರಿದೋರುತ್ತಿರುವುದೂ ವಿಚಿತ್ರವೇ ಆಗಿದೆಯಲ್ಲ..! ಸಜ್ಜನರು ಬದುಕಿನಲ್ಲಿ ಭ್ರಮಾಧೀನರಾಗುತ್ತಾ ಸಭ್ಯಜೀವನದಲ್ಲಿ ನಂಬಿಕೆಯೆ ಇಲ್ಲವಾಗುತ್ತಿದೆಯೋ ...
ಮುಂದೆ ಓದಿ>>> ಭವಲೋಕದ ಚಿಂತೆ-೨

ಮಂಗಳವಾರ, ಆಗಸ್ಟ್ 5, 2014

ಶ್ರೀನಿವಾಸ ಕಲ್ಯಾಣ ಕಥನ- ಪುನಾರಚನೆಯಲ್ಲಿ.....

  • ೧೯೯೭ ರಲ್ಲಿ ಪ್ರಕಟವಾದ ನನ್ನ ಕೃತಿ “ಸಪ್ತಗಿರಿ ಸಂಪದ” ಪೌರಾಣಿಕ ಕಾದಂಬರಿ. ಅದರ ವಿಸ್ತೃತ ಹೊಸ ಆವೃತಿಯೇ  “ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ” . 
  • ಕಲಿಯುಗಾರಂಭ ಕಾಲವೆಂದರೆ, ವೇದಕಾಲ. ಶ್ರೀ ವೆಂಕಟೇಶ ಪುರಾಣಕಥೆ ಅಥವಾ ಶ್ರೀನಿವಾಸ ಕಲ್ಯಾಣಕಥೆ, ವೇದಕಾಲೀನ ಭಾರತದ ಭವಿಷ್ಯೋತ್ತರ ಪುರಾಣ ಕಥೆ.
  • ಹಿಂದಿನ ದ್ವಾಪರಯುಗದಲ್ಲಿ ಶ್ರೀಕೃಷ್ಣ ಮಹಾಭಾರತದ ಭಗವದ್ಗೀತೆಯಲ್ಲಿ ಅರ್ಜುನನಿಗೆ ರಜೋಗುಣ, ತಮೋಗುಣ ಮತ್ತು ಸತ್ವಗುಣಗಳ ಬಗ್ಗೆ ನೀಡುವ ವಿಶ್ಲೇಷಣೆಯನ್ನೇ ಕಥಾರೂಪದಲ್ಲಿ ಹೇಳುವುದೇ "ಶ್ರೀನಿವಾಸ ಕಲ್ಯಾಣ ಕಥನ".
  • ವಿಶ್ವಸೃಷ್ಟಿಯಲ್ಲಿ ಎರಡುಪಾಲು ರಜಸ್ಸು ಮತ್ತು ತಮಸ್ಸು ಇವುಗಳೊಡನೆ ಒಂದುಪಾಲು ಸತ್ವ ಇದೆ. ಇವು ಮೂರೂ ಗುಣಗಳೊಡನೆ ನಮ್ಮ ಮನಸ್ಸು ಇರುತ್ತದೆ. ಯಾವಾಗಲೂ ಸತ್ವಗುಣ-ಸತ್ ಶಕ್ತಿಯಿಂದಲೇ ರಜೋ ಮತ್ತು ತಮೋಗುಣಗಳ ಸಂಘರ್ಷವು ನಿಗ್ರಹವಾಗುತ್ತದೆ. ಆಗುತ್ತಿರಬೇಕು. ಅದೇ ಜಗದ ಸಮತೋಲನಕ್ಕೆ ಹಾಗೂ ಜಗದೇಕ ಅಸ್ತಿತ್ವಕ್ಕೆ ಕಾರಣೀಭೂತವಾಗಿರುತ್ತದೆ. ಇದನ್ನು ವರಾಹಾವತಾರದಲ್ಲಿ ನೋಡಬಹದಾಗಿದೆ.
  • ೧. ಸತ್ವಗುಣವೆಂದರೆ- ಶಾಂತಿ, ಸಮಾಧಾನ, , ಸಂತೃಪ್ತಿ,  ಜ್ಞಾನ-ವಿಶೇ಼ಷಜ್ಞಾನ ಪೂರ್ಣತ್ವದಲ್ಲಿ ಸುಪ್ರಕಾಶ.
  •  ೨. ರಜೋಗುಣವೆಂದರೆ- ಆವೇಶ, ಆಕ್ರೋಶ, ಕೋಪ, ಪ್ರಕೋಪ, ಅನರ್ಥ ಅವಿವೇಕ
  • ೩. ತಮೋಗುಣವೆಂದರೆ- ಅಂಧಕಾರ, ಅಜ್ಞಾನ, ಅಪವೃತ್ತಿ, ವಿಕೃತಿ, ಅವಿವೇಕ, ಅಪ್ರವೃತ್ತಿ, ಅನಾಚಾರ, ಹಿಂಸೆ, ಕ್ರೌರ್ಯ..
  • ಇವು ಮೂರೂ ಗುಣಗಳು ಮನುಷ್ಯ, ಪ್ರಾಣಿ, ಸಸ್ಯ, ಭೂಮಿ, ಜಲಚರಗಳಲ್ಲಿ ಇರುತ್ತವೆ. ಇರಲೇಬೇಕಾದುದು ಸೃಷ್ಟಿನಿಯಮ. ಇವುಗಳಲ್ಲಿ ಮೊದಲನೆಯದಾದ ಸತ್ವಗುಣದಿಂದಲೇ ನಮ್ಮ ಇನ್ನೆರಡು ಗುಣಗಳ ನಿಯಂತ್ರಣ. ಅಂದರೆ, ಮೇಲಿನ ಮೂರೂಗುಣಗಳು ಮನಷ್ಯನ ಇಂದ್ರಿಯಗಳ ಮೇಲೆ ಜೀವಿತದುದ್ದಕ್ಕೂ ಪ್ರಭಾವ ಬೀರುತ್ತಲೇ ಇರುತ್ತವೆ. ಅವುಗಳನ್ನು ನಿಗ್ರಹಿಸುವುದೇ ಅವುಗಳಲ್ಲೇ ಒಂದಾಗಿರುವ ಸತ್ವಗುಣದಿಂದಲೇ. ಆ ಸತ್ ಶಕ್ತಿಯಿಂದಲೇ.
  • ಇವು ಮೂರೂ ಗುಣಗಳ ಹಿಡಿತದಲ್ಲಿದೆ ಮನುಷ್ಯನ ಇಂದ್ರಿಯ ಕಲ್ಯಾಣ.  ಪುರುಷಾರ್ಥಗಳಲ್ಲಿ ಒಂದಾದ ಕಾಮವೂ ಸತ್ವಗುಣದಿಂದಲೇ ಉದ್ದೀಪನೆಯಾಗುವುದಾದರೆ, ಎಲ್ಲರಲ್ಲೂ ಇಂದ್ರಿಯಕಲ್ಯಾಣ ಭಾವನೆಯೇ ಉಂಟಾಗುತ್ತದೆ. ಅದುವೇ ಧೀರ್ಘಾಯುಷ್ಯಕ್ಕೆ, ಆತ್ಮೋನ್ನತಿ. ಮೋಕ್ಷಕ್ಕೆ ಮಾರ್ಗವಾಗುತ್ತದೆ.
  • ಶ್ರೀನಿವಾಸ ಕಲ್ಯಾಣ ಕಥನದಲ್ಲಿ ಮೂರುಲೋಕಗಳಿಗಷ್ಟೇ ಸೀಮಿತವೆನಿಸಿಬಿಡುವ ಸತ್ವಗುಣದ ಹಿರಿಮೆಯನ್ನು ನಾವು ಪುಟಪುಟಗಳಲ್ಲೂ ನೋಡಲು ಸಾಧ್ಯವಿದೆ. ಅದನ್ನು ನಿರೂಪಣೆಯಲ್ಲಿ ಸಾದರಪಡಿಸುವುದೇ
  • "ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ”
  • ಸತ್ವಗುಣದ ಹಿರಿಮೆಯೆಂದರೆ, ಸಭ್ಯಜೀವನ. ಸಭ್ಯನ ಜೀವನದಲ್ಲಿ ಮೊದಲನೆಯ ಸಂಸ್ಕಾರವೇ ವಿವಾಹ ಸಂಸ್ಕಾರ. ಅಂದರೆ, ಸಭ್ಯ ಗೃಹಸ್ಥಾಶ್ರಮ ಧರ್ಮ ಸ್ವೀಕಾರವೇ ಮನುಷ್ಯರಿಗೆ ಶ್ರೇಷ್ಠ. ವಿಶ್ವಜೀವನಲ್ಲಿ ಗಂಡು ಹೆಣ್ಣಿನ ಪ್ರೀತಿ-ಪ್ರೇಮ ಮತ್ತು ಅನುರಾಗ ಬಂಧನ ಇವುಗಳು ಅರ್ಥಪೂರ್ಣವಾಗುವುದೇ ವಿಶ್ವಜೀವನದಲ್ಲಿ ವಿವಾಹಜೀವನಾದರ್ಶದಲ್ಲಿ.  ವಿವಾಹಜೀವನದ ಪ್ರಾಮುಖ್ಯತೆಯೆ ದಾಂಪತ್ಯ ನೀತಿ.
  • ವಾಸ್ತವಿಕ, ತಾತ್ವಿಕ ಹಾಗೂ ವೈಜ್ಞಾನಿಕವಾಗಿ  ಕೌಟುಂಬಿಕ, ಸಾಮಾಜಿಕ ನೆಲೆಯಲ್ಲಿ ವಿಮರ್ಶಾತ್ಮಕವಾಗಿ ಪುನಾರಚನೆಯಲ್ಲಿ ಮೂಲಕಥೆಗೆ ಚ್ಯುತಿ ಬಾರದಂತೆ “ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ” ತಿಳಿಸುತ್ತದೆ ಎಂದರೆ ಅದು ಅಚ್ಚರಿಯೇ; ಆ ದೇವ ದೇವನ ಕೃಪೆಯೇ ಎನ್ನಬೇಕಷ್ಟೆ. 
  • ಅಂತೆಯೆ, ವಿವಾಹಜೀವನವೇ ಮನುಷ್ಯನಿಗೆ ಆರೋಗ್ಯಕರವಾದ ಬದುಕು ಭವಿಷ್ಯಕ್ಕೆ ಪೂರಕ ಹಾಗೂ ಜೀವಿತ ಸಾರ್ಥಕ್ಯವೆನಿಸುವುದು.  ಇದನ್ನು ಕಥಾರೂಪದಲ್ಲಿ ನಿವೇದಿಸುವುದೇ ಶ್ರೀನಿವಾಸ ಕಲ್ಯಾಣ. ಅದರ ಪುನಾರಚನೆಯಲ್ಲಿ ಅಮೂರ್ತವಾಗಿರುವ ಮೌಲಿಕ ಪರಿಕಲ್ಪನೆಗಳು ಕಥಾಸಂವಿಧಾನ, ಸಂಭಾಷಣೆಯಲ್ಲಿ ಥೆಯ ಉದ್ದಕ್ಕೂ ಮೂರ್ತವಾಗುತ್ತಾ ಅನಾವರಣಗೊಳ್ಳುವುದನ್ನು “ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚದಲ್ಲಿ” ಕಾಣಬಹುದಾಗಿದೆ .